ಕಳೆ ಮತ್ತು ಕಳೆ ಹತೋಟಿ

	ಬೇಡದೆಡೆ ಬೆಳೆಯುವ ಸಸ್ಯಗಳನ್ನು ಕಳೆಯೆಂದು ಕರೆಯುತ್ತೇವೆ. ಸ್ಥಳ ಮತ್ತು ಸಂದರ್ಭಗಳ ಔಚಿತ್ಯದ ಮೇಲೆ ಕಳೆಯೇ ಅಥವಾ ಬೆಳೆಯೇ ಎಂಬ ಅಂಶ ನಿರ್ಧಾರವಾಗಬೇಕಾಗುತ್ತದೆ. ಉದಾಹರಣೆಗೆ ಗಣ್ಣೆ (ಸ್ಯಾಂಡ್ ಪ್ಲಾಂಟ್). ಮುಖ್ಯವಾಗಿ ನಾವು ಬೆಳೆಸಬೇಕಾದ ಬೆಳೆಯನ್ನು ಗಮನದಲ್ಲಿಟ್ಟು ಅದಲ್ಲದ್ದನ್ನೂ ಮತ್ತು ಅದಕ್ಕೆ ಮಾರಕವಾಗಬಲ್ಲ ಸಸ್ಯವರ್ಗವನ್ನೂ ಕಳೆ ಎಂದು ಹೇಳಬಹುದು. ಕಳೆಸಸ್ಯಗಳು ಪೈರಿನೊಡನೆ ನೀರು, ಸ್ಥಳ, ಸೂರ್ಯರಶ್ಮಿ ಮತ್ತು ಪೋಷಕಗಳಿಗೆ ಸ್ಪರ್ಧಿಸಿ ಪೈರಿಗೆ ಹಾನಿ ಮಾಡುವುದರಿಂದ ಅವುಗಳ ನಿವಾರಣೆ ಅನಿವಾರ್ಯ. ಹಾಗೆಯೇ ಇವು ಸನ್ನಿವೇಶದ ಸೊಬಗನ್ನು ಕೆಡಿಸಬಹುದು. ಕುಡಿಯುವ ನೀರಿನಲ್ಲಿ ಬೆಳೆದು ಅದನ್ನು ಕಲುಷಿತವಾಗಿ ಮಾಡಬಹುದು.

	ಬೇಸಾಯದ ಭೂಮಿಗಳಲ್ಲಿ, ಬಂಜರು ಜಾಗಗಳಲ್ಲಿ, ನೀರಿನಲ್ಲಿ, ನೀರಾವರಿ ಭೂಮಿಯಲ್ಲಿ, ಸಮುದ್ರ ಮಟ್ಟದಿಂದ ಎಲ್ಲ ಎತ್ತರಗಳಲ್ಲಿ, ಕಾಲಭೇದವಿಲ್ಲದೆ ಕಳೆಬೆಳೆಯುತ್ತದೆ. ಈ ಕಾರಣದಿಂದ ಇದರ ನಾಶ ಕಷ್ಟವಾದುದು. ಇದನ್ನು ಹತೋಟಿಯಲ್ಲಿಡಲು ಮತ್ತು ಸಾಧ್ಯವಿದ್ದಲ್ಲಿ ಇದರಿಂದ ಉಪಯೋಗ ಪಡೆಯಲು ಕಳೆಯ ವೈವಿಧ್ಯ, ವೈಶಿಷ್ಟ್ಯಗಳ ಪರಿಶೀಲನೆ ಅಗತ್ಯ. ಕಳೆಯೆದುರಿನ ಹೋರಾಟದಲ್ಲಿ ಅದರ ನಿರ್ಮೂಲನವೊಂದೇ ಅಲ್ಲದೆ ಅದು ಬೆಳೆಯದಂತೆ ತಡೆಯುವ ಕ್ರಮಗಳೂ ಮುಖ್ಯ. ಕಳೆಬೀಜಗಳಿಂದ ವಿಮುಕ್ತವಾಗಿರುವ ನೀರು, ಕಳೆ ಹತೋಟಿ ಕ್ರಮಗಳ ಕಟ್ಟುನಿಟ್ಟಾದ ಆಚರಣೆ, ಸ್ವಚ್ಛ ಬೀಜಗಳ ಬಳಕೆ ಮುಂತಾದವೆಲ್ಲವೂ ಕಳೆ ಹತೋಟಿ ಕಾರ್ಯಕ್ರಮದ ಅಂಗಗಳು. ಪೈರಿಗೆ ಹಿತ ಸನ್ನಿವೇಶ ಅಗತ್ಯ. ಆದರೆ, ಕಳೆಗೆ ಯಾವ ಸನ್ನಿವೇಶಕ್ಕೆ ಬೇಕಾದರೂ ಹೊಂದಿಕೊಳ್ಳುವ ಸಾಮಥ್ರ್ಯ ಇದೆ. ಅನೇಕ ಕಳೆಗಳು ಅದರಲ್ಲೂ ಬಹುವಾರ್ಷಿಕ ಬಗೆಯವು ಬೀಜದ ಅಗತ್ಯವಿಲ್ಲದೆ ಬೇರಿನ ಹರಡುವಿಕೆಯಿಂದಲೇ ಬೆಳೆಯುತ್ತವೆ. ಕೆಲವು ಕಳೆಗಳು ಕ್ಷೀಣವಾದ ಎಲೆಗಳು, ಮಾರ್ಪಾಡಾದ ಕಾಂಡ, ಇಲ್ಲವೇ ಬೇರು ಗೆಡ್ಡೆಗಳ ಸಹಾಯದಿಂದ ವಿಷಮ ಪರಿಸ್ಥಿತಿಯನ್ನು ಎದುರಿಸಿ ಪೈರಿನೊಡನೆ ಸ್ಪರ್ಧಿಸುತ್ತವೆ. ಈ ರೀತಿಯ ವ್ಯಾಪಕವಾದ ತಳಿವೃದ್ಧಿ ಸಾಮಥ್ರ್ಯವಿರುವುದರಿಂದ ಈ ಕಳೆಗಳ ಹಾವಳಿ ತಡೆಯಲಾರದಷ್ಟು ಹೆಚ್ಚಾಗುತ್ತದೆ. ಕಳೆ ಸಸ್ಯಗಳು ಅಸಂಖ್ಯಾತವಾಗಿ ಬೀಜಗಳನ್ನು ಉತ್ಪಾದಿಸುತ್ತವೆ. ಅಲ್ಲದೆ ಈ ಬೀಜಗಳು ತಮ್ಮ ಮೊಳಕೆಯೊಡೆಯುವ ಸಾಮಥ್ರ್ಯವನ್ನು ಹಲವಾರು ವರ್ಷಗಳವರೆಗೆ ಉಳಿಸಿಕೊಂಡಿರುತ್ತವೆ. ಕರಿಸಾಸುವೆ (ಬ್ರಾಸಿಕ ನೈಗ್ರ) ಮತ್ತು ಅಬ್ಯುಟಿಲಾನ್ ಎಂಬ ಕಳೆಗಳ ಬೀಜಗಳು 50-70 ವರ್ಷಗಳಾದ ಮೇಲೂ ಮೊಳಕೆಯೊಡೆಯುವುದು ಕಂಡುಬಂದಿದೆ.

	ಕಳೆಗಳ ಇನ್ನೊಂದು ವಿಶೇಷ ಗುಣ, ಬೀಜ ಪ್ರಸಾರಕ್ಕೆ ಅವು ಹೊಂದಿರುವ ಸಾಧನಾನುಕೂಲ. ಕಂಪಾಸಿóಟೀ ಕುಟುಂಬಕ್ಕೆ ಸೇರಿದ ಅನೇಕ ಕಳೆಗಳಲ್ಲಿ ಗಾಳಿಯ ಸಹಾಯದಿಂದ ಪ್ರಸಾರವಾಗಲು ಸಹಾಯಕವಾಗುವ ಬೀಜದ ತುಪ್ಪಳು (ಪ್ಯಾಪಸ್) ಇದೆ. ಕೆಲವು ಕಳೆ ಬೀಜಗಳಿಗೆ ಕೊಕ್ಕೆಯಂಥ ಸಾಧನ ಇದೆ. ಇದರಿಂದ ಇವು ದನಗಳ ಚರ್ಮಕ್ಕೆ ಇಲ್ಲವೇ ಜನರ ಬಟ್ಟೆಗೆ ಸಿಕ್ಕಿಕೊಂಡು ಹರಡುವುದು ಸಾಧ್ಯ. ಬಹುಪಾಲು ಕಳೆಗಳ ಬೀಜಗಳು ಪೈರಿನ ಬೀಜ ಬಲಿಯುವಾಗಲೇ ಬಲಿಯುತ್ತವೆ. ಕಳೆ ಮತ್ತು ಪೈರಿನ ಕಾಳುಗಳ ಗಾತ್ರ ಒಂದೇ ಆಗಿದ್ದಲ್ಲಿ ಪೈರಿನ ಬೀಜದೊಡನೆ ಬೆರೆತು ಮುಂದಿನ ಪೈರಿನಲ್ಲಿ ಬಿತ್ತನೆಯಾಗಿ ಬಿಡುವ ಸಂಭವವುಂಟು.

	ಎಷ್ಟೊ ವೇಳೆ ಅಲಂಕಾರಕ್ಕೆಂದು ಬೆಳೆಸಿದ ಗಿಡಗಳು ಕಳೆಗಳಾಗಿ ಪರಿಣಮಿಸಿ ಹಾನಿಕಾರಕವಾಗುತ್ತವೆ. ಉದಾಹರಣೆಗೆ ಐಕ್ಹಾರ್ನಿಯ ಕ್ರಾಸಿಪೆಸ್ (ಅಂತರ ತಾವರೆ). ಕಳೆ ಬೀಜಗಳು ಗೊಬ್ಬರ ಮತ್ತು ಕೃಷಿ ಸಲಕರಣೆಗಳ ಮೂಲಕ ಸ್ಥಳಾಂತರವಾಗುತ್ತವೆ. ದಕ್ಷಿಣ ಭಾರತದಲ್ಲಿ ಬಹು ಸಾಮಾನ್ಯವಾಗಿರುವ ಆಲ್ಟರ್‍ನಾಂತೆರ ಎಕೈನೇಟ (ಮುಳ್ಳುಹೊನಗೊನೆ) ಮತ್ತು ಅಕ್ಯಾಂತೊಸ್ಪರ್ಮಮ್ ಹಿಸ್ಟಿಡಮ್ (ಕಡ್ಲೆಮುಳ್ಳು) ಮುಂತಾದುವು ಹಡಗು, ರೈಲುಗಳ ಮೂಲಕ ಅಮೆರಿಕದಿಂದ ಬಂದವು. ಮೊದಲು ಇವು ಕಾಣಿಸಿದ್ದು ರೈಲ್ವೇ ನಿಲ್ದಾಣದ ಹತ್ತಿರ

	ಕಳೆಗಳಿಂದಾಗುವ ಹಾನಿ: ಕಳೆಗಳಿಗೆ ಬೇಕಾದದ್ದು ಕೇವಲ ಸ್ಥಳ ಮತ್ತು ಬೆಳಕು ಮಾತ್ರವಾದರೆ ಪೈರಿಗೆ ಅಷ್ಟೇನೂ ತೊಂದರೆಯಾಗುವ ಸಂಭವವಿಲ್ಲ. ಆದರೆ ಪೈರಿಗೆಬೇಕಾದ ಇತರ ಎಲ್ಲ ವಸ್ತುಗಳು ಸಹ ಇವಕ್ಕೆ ಅಗತ್ಯ. ಆದ್ದರಿಂದ ಪೈರಿನೊಡನೆ ಸ್ಪರ್ಧಿಸುತ್ತವೆ. ಸ್ಪರ್ಧೆಯಲ್ಲಿ ಕಳೆಗಳ ಜಯವೇ ನಿಶ್ಚಯ. ಕಳೆಯೊಡನೆ ಪೈರಿನ ಹೋರಾಟ ಯಾವಾಗಲೂ ಇದ್ದದ್ದೇ. ಕಳೆಗಳಿಂದ ಕೂಡಿದ ಗೋದಿ ಹೊಲದಲ್ಲಿ ಕಳೆಗಳು ಒಂದು ಎಕರೆಗೆ 17 ಪೌಂಡ್ ಸಾರಜನಕವನ್ನು ನುಂಗಿಹಾಕಿಬಿಡುತ್ತವೆ. ಅಂದರೆ ಅಷ್ಟು ಗೋದಿ ಇಳುವರಿ ಹೋದ ಹಾಗಾಯಿತು. ಎರಡನೆಯದಾಗಿ ಕಳೆಗಳು ಭೂಮಿಯಲ್ಲಿನ ನೀರನ್ನು ತೀವ್ರಗತಿಯಲ್ಲಿ ಬಳಸುತ್ತವೆ. ಇದರ ಪರಿಣಾಮ, ಅದರಲ್ಲೂ ಮರಳು ಭೂಮಿಗಳಲ್ಲಿ, ಅಗಾಧ. ಕೆಲವು ಕಳೆಗಳು ಹೂವಾಗುವ ವರೆವಿಗೆ ಬಳಸುವ ನೀರಿನ ಪ್ರಮಾಣ ಎಕರೆಗೆ 813 ಟನ್ ಎಂದು ತಿಳಿದಿದೆ. ಉದಾಹರಣೆಗೆ ಗರಿಕೆ ಹುಲ್ಲು. ಅದೇ ಜೋಳ ಬಳಸುವ ನೀರಿನ ಪ್ರಮಾಣ ಕೇವಲ 430 ಟನ್. ಕಳೆಗಳಿಲ್ಲದಿದ್ದಲ್ಲಿ ಎಕರೆಗೆ 506 ಟನ್ನುಗಳಷ್ಟು ನೀರನ್ನು ಉಳಿಸುವುದು ಸಾಧ್ಯ. ಮೂರನೆಯದಾಗಿ, ಕಳೆಗಳಿದ್ದಲ್ಲಿ ಸಾಗುವಳಿ ಖರ್ಚು ಹೆಚ್ಚುವುದು. ಅಲ್ಲದೆ ಕಳೆಬೀಜ ಸೇರುವುದರಿಂದ ಉತ್ಪನ್ನದ ಗುಣ ಕೀಳುದರ್ಜೆಯದಾಗುತ್ತದೆ. ಕಳೆ ಹತೋಟಿಗೆ ಪೈರಿನ ಬೆಲೆಯ 10%-30% ಖರ್ಚು ಆಗುತ್ತದೆ. ನಾಲ್ಕನೆಯದಾಗಿ ಕಳೆಗಳಿಂದ ರೋಗ ಹರಡುತ್ತದೆ. ಬೆಳೆಗಳು ಅನೇಕ ಬೂಷ್ಟು ಮತ್ತು ಬ್ಯಾಕ್ಟೀರಿಯ ರೋಗಗಳಿಗೆ ತುತ್ತಾಗುತ್ತವೆ. ಕೀಟಪೀಡೆಗಳಿಗೆ ಕಳೆಗಳು ಆಶ್ರಯ ಕೊಡುತ್ತವೆ. ಉದಾಹರಣೆಗೆ, ಬತ್ತದ ಕಾಂಡ ಕೊರೆಯುವ ಹುಳು ಕಳೆಗಳಲ್ಲಿ ಆಶ್ರಯ ಪಡೆದು ಪೈರಿಗೆ ವರ್ಗಾವಣೆ ಹೊಂದುತ್ತದೆ. ಪರೋಪಜೀವಿಗಳಾದ ಕೆಲವು ಕಳೆಸಸ್ಯಗಳು ಬಹಳ ಉಪದ್ರವಕಾರಿಗಳು. ಆಶ್ರಯದಾತ ಸಸ್ಯಗಳನ್ನೇ ಕೊಲ್ಲುವುದರ ಮೂಲಕ ಗಣನೀಯ ಪ್ರಮಾಣದಲ್ಲಿ ಪೈರನ್ನು ನಷ್ಟ ಮಾಡಬಲ್ಲವು. ಉದಾಹರಣೆಗೆ ಲೊರ್ಯಾಂತಸ್, ವಿಸ್ಕಮ್, ಓರೊಬ್ಯಾಂಕೆ (ಬೆಂಕಿಗಿಡ), ಸ್ಟ್ರೈಗ ಮುಂತಾದುವು. ದತೂರ ಫ್ಯಾಸ್ಟುಯೋಸ (ಕರೀಉಮ್ಮತ್ತಿ) ಮತ್ತು ಸೊಲ್ಯಾನಮ್ ನೈಗ್ರಮ್‍ನಂಥ (ಕರಿಕಾಚಿಗಿಡ) ಅನೇಕ ಕಳೆಗಳನ್ನು ಜಾನುವಾರುಗಳು ಮತ್ತು ಮನುಷ್ಯರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ವಿಷವಾಗಬಲ್ಲುವು. ಇದಲ್ಲದೆ ಕಾಲುವೆ, ಚರಂಡಿಗಳಲ್ಲಿ ಕಳೆಗಳು ಬೆಳೆದು ನೀರು ಹಾಯುವುದಕ್ಕೆ ಅಡಚಣೆ ಆಗುವುದುಂಟು. ಕುಡಿಯುವ ನೀರು ಸಹ ಜಲ ಕಳೆಗಳ ಬೆಳೆವಣಿಗೆಯಿಂದ ಕೆಟ್ಟುಹೋಗುತ್ತದೆ.

	ಕಳೆ ಬೀಜಗಳು, ತಮಗಿರುವ ಕೊಕ್ಕೆ ಮತ್ತು ಮುಳ್ಳುಗಳ ಸಹಾಯದಿಂದ ಮೇಯಲು ಬಂದ ಕುರಿಗಳ ಉಣ್ಣೆಗೆ ಅಂಟಿಕೊಳ್ಳತ್ತವೆ. ಅವನ್ನು ಬಿಡಿಸುವುದು ಸಾಧ್ಯವಾಗದೆ ಉಣ್ಣೆಯ ಗುಣಮಟ್ಟ ಇಳಿಯುತ್ತದೆ.

	ಕಳೆಗಳಿಂದ ಪ್ರಯೋಜನ: ಕಳೆಗಳು ವಿನಾಶಕಾರಿಗಳೆಂದು ಕಡೆಗಾಣಿಸಲ್ಪಟ್ಟಿದ್ದರೂ ಅವುಗಳಿಂದ ಕೆಲವು ಪ್ರಯೋಜನಗಳಿವೆ. ಅವುಗಳಲ್ಲಿ ಎಲೆ, ಕಾಂಡ, ಬೀಜಗಳು ಜಾನುವಾರುಗಳಿಗೆ ಕಾಡುಮೃಗಗಳಿಗೆ ಮೇವಿಗೆ ಬರುತ್ತವೆ. ಪ್ಯಾನಿಕಮ್ ರಿಪೆನ್ಸ್ (ಶುಂಠಿ ಹುಲ್ಲು) ಎಂಬ ಜಾತಿಯ ಕಳೆ ಮಣ್ಣಿನ ಕಣಗಳನ್ನು ಬಂಧಿಸಿ ಮಣ್ಣಿನ ಸವಕಳಿಯನ್ನು ತಡೆಯಬಲ್ಲದು. ಸೈಪರೇಸೀ ಕುಟುಂಬಕ್ಕೆ ಸೇರಿದ ಹುಲ್ಲುಗಳಿಂದ ಚಾಪೆ ಮತ್ತು ತೆರೆಗಳನ್ನು ಮಾಡುತ್ತಾರೆ. ಅನೇಕ ಕಳೆಗಳನ್ನು ಅನೇಕ ರೋಗಗಳ ಮತ್ತು ಹಾವಿನ ವಿಷದ ಪರಿಹಾರಕ್ಕೆ ಬಳಸುತ್ತಾರೆ. ಹಾಗೆಯೇ ಕಳೆ ಸಸ್ಯಜಾತಿಯನ್ನು ಗುರುತಿಸಿ ಮಣ್ಣಿನ ಗುಣಾಂಶ, ಅಂದರೆ ಮಣ್ಣು ಉತ್ಕøಷ್ಟವೇ ಅಲ್ಲವೇ ಎಂಬುದನ್ನು ಕಂಡು ಹಿಡಿಯಬಹುದು. ಉದಾಹರಣೆಗೆ ಪ್ಯಾನಿಕಮ್ ಕಲೋನಮ್ (ಕರೀಕಡ್ಡಿ ಹುಲ್ಲು) ಬೆಳೆಯಬೇಕಾದರೆ ಮಣ್ಣು ಒಳ್ಳೆಯದೇ ಇರಬೇಕು. ಸಿಂಬೋಪೋಗಾನ್ ಸೀಸಿಯಸ್ (ಕಾಸಿ ಹುಲ್ಲು) ಮರಳು ಮಣ್ಣಿನಲ್ಲಿ ಬೆಳೆಯುತ್ತದೆ. ಸೆಜ್ಜಸ್ ಜೊಂಡು ಇದ್ದರೆ ಅಂಥ ಮಣ್ಣಿನಲ್ಲಿ ನೀರು ಸರಾಗವಾಗಿ ಹರಿದು ಹೋಗದು ಎಂದು ತಿಳಿಯಬಹುದು. ಅನೇಕ ಬಗೆಯ ಕಳೆಗಳನ್ನು ಕಾಂಪೋಸ್ಟ್ ತಯಾರಿಸುವುದಕ್ಕೆ ಬಳಸಬಹುದು. ಕ್ಯಾಲೋಟ್ರೋಪಿಸ್ ಜೈಗಾಂಶಿಯ (ಎಕ್ಕ) ಮತ್ತು ಟೆಫ್ರೋಸಿಯ ಪಪ್ರ್ಯೂರಿಯಗಳನ್ನು (ಕೊಗ್ಗಿಲಿ) ಹಸುರೆಲೆ ಗೊಬ್ಬರವಾಗಿ ಉಪಯೋಗಿಸುವುದುಂಟು. ಒಪನ್ಶಿಯ (ಪಾಪಾಸುಕಳ್ಳಿ) ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಹಳ ಒಳ್ಳೆಯ ಕಚ್ಚಾವಸ್ತು. ಗದ್ದೆಗಳಲ್ಲಿ, ಸ್ಥಳದಲ್ಲೇ ಹಸಿರು ಗೊಬ್ಬರ ಬೆಳೆಯದಿದ್ದೆಡೆ, ಕಳೆಗಳೇ ಆವರ್ತನ ಬೆಳೆಯಾಗಿ ನೈಟ್ರೇಟ್ ರೂಪದ ಸಾರಜನಕ ಪೋಲಾಗುವುದನ್ನು ತಪ್ಪಿಸುತ್ತವೆ.

	ಕಳೆಗಳ ವರ್ಗೀಕರಣ. ಎಲ್ಲ ಬಗೆಯ ಕಳೆಸಸ್ಯಗಳು ಎಲ್ಲ ಕಡೆ ಸ್ವಲ್ಪ ಹೆಚ್ಚು ಕಡಿಮೆ ಬೆಳೆದರೂ ಅವನ್ನು ಕೆಳಕಂಡಂತೆ ವರ್ಗೀಕರಿಸಲು ಸಾಧ್ಯ: 1 ರಸ್ತೆ ಅಕ್ಕಪಕ್ಕದಲ್ಲಿ ಬೆಳೆಯುವ ಕಳೆಗಳು. 2 ಬಂಜರು ಭೂಮಿಗಳ ಕಳೆ. 3 ಬೇಸಾಯದ ಭೂಮಿಯಲ್ಲಿನ ಕಳೆ. 4 ಜಲಕಳೆ. 5 ಪರೋಪಜೀವಿ ಕಳೆಗಳು.

	ಬೇಸಾಯದ ಭೂಮಿಯ ಕಳೆಗಳನ್ನು, ಕಳೆಗಳ ಜೊತೆಗೆ ಬೆಳೆಯುವ ಪೈರಿನ ಆಧಾರದ ಮೇಲೆ, ಯಾವ ಕಾಲದಲ್ಲಿ ಬೆಳೆಯುತ್ತವೆ ಎಂಬ ಆಧಾರದ ಮೇಲೆ ಮತ್ತು ಯಾವ ರೀತಿಯ ಮಣ್ಣಿನಲ್ಲಿ ಬೆಳೆಯುತ್ತವೆ ಎಂಬ ಅಂಶದ ಮೇಲೆ 3 ಉಪವರ್ಗಗಳಾಗಿ ವಿಂಗಡಿಸಬಹುದು. ಈ ವರ್ಗೀಕರಣ ಬಹಳ ಸಮರ್ಪಕವೇನಲ್ಲ. ಒಂದು ಬಗೆಯ ಕಳೆ ಇನ್ನೊಂದೆಡೆ ಬೆಳೆಯುವುದು ಸಾಮಾನ್ಯ.

	1 ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಳೆಯುವ ಕಳೆ: ಆಲ್ಟರ್ ನ್ಯಾಂತೆರ ಎಕೈನೇಟ (ಮುಳ್ಳು ಹೊನಗೊನೆ), ಗ್ರಾಂಫ್ರೀನ ಸಿಲೋಸಿಯಾಯ್ಡಿಸ್, ಯೂಫೋರ್ಬಿಯ ಪೈಲುಲಿಫೆರ (ಕೆಂಪುನೆನೆ ಅಕ್ಕೀ ಸೊಪ್ಪು) ಮತ್ತು ಸೈನೋಡಾನ್ ಡ್ಯಾಕ್ಟಿಲನ್ (ಗರಿಕೆ ಹುಲ್ಲು) ಮುಂತಾದ ಕಳೆಗಳು ಮುಖ್ಯವಾಗಿ ರಸ್ತೆಯ ಅಕ್ಕಪಕ್ಕದಲ್ಲಿರುತ್ತವೆ. ನೆಲದ ಮೇಲೆಯೇ ಹಬ್ಬಿ ಬೆಳೆಯುವುದರಿಂದ ಎದ್ದು ಕಾಣುವುದಿಲ್ಲ. ದನ, ಜನ ಮತ್ತು ವಾಹನಗಳ ಹಾವಳಿಯನ್ನು ಎದುರಿಸಿ ಬದುಕಬಲ್ಲ ಸಾಮಥ್ರ್ಯ ಇವಕ್ಕಿವೆ. ಈ ಕಾರಣದಿಂದ ಮತ್ತು ಇವು ಉತ್ಪನ್ನಮಾಡುವ ಹೆಚ್ಚು ಬೀಜಗಳ ದೆಸೆಯಿಂದ ಇವುಗಳ ಜಾತಿಹಾಳಾಗದೇ ಉಳಿದಿದೆ.

	2 ಬಂಜರು ಭೂಮಿ ಮತ್ತು ಬೇಲಿಗಳಲ್ಲಿನ ಕಳೆ: ಪರಿಸರದ ಸೊಬಗನ್ನು ಈ ಕಳೆಗಳು ಹಾಳು ಮಾಡುತ್ತವೆ. ಈ ಗುಂಪಿನಲ್ಲಿ ಹಿಪ್ಟಿಸ್ ಸುಯೇವೆಲೆನ್ಸ್, ಲ್ಯೂಕಾಸ್ ಆಸ್ಪೆರ (ತುಂಬೆ), ಸ್ಟಾಕಿಟಾರ್ಫೆಟ ಇಂಡಿಕ (ಕಾಡು ಉತ್ತರಾಣಿ), ಅಕಿರಾಂತಸ್ ಆಸ್ಪೆರ (ಉತ್ತರಾಣಿ), ಕ್ಯಾಸಿಯ ಟೋರ (ಗಂಡು ತಗಚೆ), ಕ್ಯಾಲೋಟ್ರೋಪಿಸ್ ಜೈಗಾಂಶಿಯ (ಎಕ್ಕದ ಗಿಡ), ಆರ್ಜಿಮೋನ್ ಮೆಕ್ಸಿಕಾನ, (ದತ್ತೂರಿಗಿಡ), ಒಪನ್ಶಿಯ (ಪಾಪಾಸುಕಳ್ಳಿ), ಲಂಟಾನ ಕ್ಯಾಮೆರ (ಲಂಟವಾಣಿಗಿಡ), ಅಜಿರೇಟಂ (ಎರಾಳೆ ಗಿಡ) ಮತ್ತು ಮಿಮೋಸ ಪ್ಯೂಡಿಕ (ಮುಟ್ಟಿದರೆ ಮುನಿ)-ಇವನ್ನು ಹೆಸರಿಸಬಹುದು. ಇವು ಮೂಲಿಕೆ ಅಥವಾ ಪೊದೆ ಸಸ್ಯಗಳಾಗಿರಬಹುದು, ಇಲ್ಲವೇ ವಾರ್ಷಿಕ, ದ್ವೈವಾರ್ಷಿಕ ಅಥವಾ ಬಹುವಾರ್ಷಿಕ ಸಸ್ಯಗಳಾಗಿರಬಹುದು. ಇವುಗಳಲ್ಲಿ ಕೆಲವು ವಿಷಪೂರಿತವಾದವು. ದತ್ತೂರಿ ಗಿಡ ಮತ್ತು ಎಕ್ಕದ ಗಿಡ ಇಂಥವು ಔಷಧಿಯಾಗಿ ಬಳಕೆಗೆ ಬರುತ್ತವೆ. ಬೀಜದಿಂದಲೂ ಬಳ್ಳಿಯಿಂದಲೂ ಇವುಗಳ ವಂಶಾಭಿವೃದ್ಧಿಯಾಗುತ್ತದೆ. ಇವುಗಳ ನಾಶ ಕಷ್ಟ. ಹೂ ಬಿಡುವುದಕ್ಕೆ ಮುಂಚೆ, ಇವನ್ನು ಕಿತ್ತು ಸುಡುವುದು ಇವುಗಳ ಹತೋಟಿಗೆ ಸೂಕ್ತ ಮಾರ್ಗ.

	3 ಬೇಸಾಯದ ಭೂಮಿಯ ಕಳೆಗಳು: ಸಿಲೋಶಿಯ ಅರ್ಜೆಂಸಿಯ (ಅಣ್ಣೆ ಸೊಪ್ಪು), ಸಾಂಕಸ್ (ಕಾಡುಸಣ್ಣ ಹೊಗೆಸೊಪ್ಪು), ಟ್ರೈಡಾಕ್ಸ್ ಪ್ರೊಕಂಬೆನ್ಸ್ (ಗಬ್ಬು ಸಣ್ಣಶಾವಂತಿ), ಸ್ಟ್ರೈಗ, ಓರೊಬ್ಯಾಂಕೆ (ಬೆಂಕಿಗಿಡ) ಮತ್ತು ಹುಲ್ಲು ಜಾತಿಯ ಕಳೆಗಳು ಕೃಷಿ ಭೂಮಿಯಲ್ಲಿ ಇದ್ದು ಬೆಳೆಗಳ ಜೊತೆ ಸ್ಪರ್ಧಿಸುತ್ತವೆ. ಇವುಗಳ ಹತೋಟಿಗೆ ಅನೇಕ ಪ್ರಯತ್ನಗಳನ್ನು ಮಾಡಿದರೂ ಇವುಗಳ ಮೂಲೋಚ್ಚಾಟನೆ ಆಗದೆ ಉಳಿಯುತ್ತವೆ. ಇವುಗಳ ಅಸಂಖ್ಯಾತ ಬೀಜಗಳು, ಬಳ್ಳಿಗಳಿಂದ ಹರಡಿ ಬೆಳೆಯುವ ಶಕ್ತಿ, ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮಥ್ರ್ಯ ಮುಂತಾದುವುಗಳಿಂದ ಇವು ಮಾನವ ಶಕ್ತಿಗೆ ಮಣಿಯದೆ ನಿಂತಿವೆ. ಬೇಸಾಯದ ಭೂಮಿಯಲ್ಲಿನ ಕಳೆಗಳಲ್ಲಿ ಮುಖ್ಯವಾದವು ಇವು: ಬತ್ತದ ಗದ್ದೆಗಳಲ್ಲಿ ಬೆಳೆಯುವ ಅರ್ವ ಲ್ಯಾನೇಟ (ಬಿಳಿಹಿಂಡೀ ಸೊಪ್ಪು), ಎರಿಯೊಕಾಲಾನ್, ಸೈಪರಸ್ ರೊಟಂಡಸ್ (ಕೊನ್ನಾರಿಗೆಡ್ಡೆ), ಜೋಳದ ಪೈರಿನೊಂದಿಗೆ ಬೆಳೆಯುವ ಸ್ಟ್ರೈಗ, ಸೋರ್ಗಮ್ ಹ್ಯಾಲೆಪೆನ್ಸ್, ಗೋಧಿ ಬೆಳೆಯೊಂದಿಗಿರುವ ಕೀನೋಪೋಡಿಯಮ್ ಆಲ್ಬಮ್ (ಕಾಡು ಓಮು) ಮತ್ತು ಉಮ್ಮತ್ತಿಗಿಡ. ಇವಲ್ಲದೆ ಓರೊಬ್ಯಾಂಕೆ (ಬೆಂಕಿಗಿಡ) ಡೈಜೆರ ಆರ್ವೆನ್ಸಿಸ್, ಜಸ್ಟಿಸಿಯ, ಅಮರ್ಯಾಂತಸ್ ಸ್ಟೈನೋಸಸ್ (ಮುಳ್ಳು ಕೀರೇಸೊಪ್ಪು), ಗರಿಕೆ ಹುಲ್ಲು, ಅಕ್ಯಾಂತೋಸ್ಪರ್ಮಮ್ ಹಿಸ್ಟಿಡಮ್, ಅಣ್ಣೆ ಸೊಪ್ಪು ಮೊದಲಾದವೂ ಮುಖ್ಯವಾದವು.

	4 ಜಲಕಳೆಗಳು: ಇವು ನೀರಿನಲ್ಲಿ ಬೆಳೆಯುವ ಕಳೆಗಿಡಗಳು. ಕೊಳ, ಹಳ್ಳ ಮತ್ತು ಕಾಲುವೆಗಳಲ್ಲಿ ಇವು ಸಾಮಾನ್ಯ. ಇವು ಕಾಲುವೆಗಳಲ್ಲಿ ನೀರು ಹರಿಯುವುದಕ್ಕೆ ಅಡಚಣೆ ಮಾಡುತ್ತವೆ. ಇಲ್ಲವೇ, ದುರ್ಗಂಧ ಉಂಟು ಮಾಡಿ ನೀರನ್ನು ಹೊಲಸು ಮಾಡುತ್ತವೆ. ಇವನ್ನು ಕೂಡಿಸಿ ಸುಟ್ಟು, ನಾಶ ಮಾಡಬಹುದು, ಇಲ್ಲವೇ ರಾಸಾಯನಿಕಗಳಿಂದ ನಿವಾರಿಸಬಹುದು. ಜಲಕಳೆಗಳಲ್ಲಿ ಮುಖ್ಯವಾದವು ಇವು: ಐಕ್ಹಾರ್ನಿಯ, ಪಿಸ್ಟಿಯ, ಹೈಡ್ರಿಲ ಮತ್ತು ವ್ಯಾಲಿಸ್‍ನೇರಿಯ.

	5 ಪರೋಪಜೀವಿ ಕಳೆಗಳು: ತಮ್ಮ ಆಹಾರಕ್ಕೆ ಮತ್ತು ಆಸರೆಗೆ ಬೇರೆ ಸಸ್ಯಗಳನ್ನು ಅವಲಂಬಿಸಿ ಜೀವಿಸುವಂಥವು ಇವು. ಸ್ಟ್ರೈಗ, ಓರೊಬ್ಯಾಂಕೆ (ಬೆಂಕಿಗಿಡ), ಲೊರ್ಯಾಂತಸ್ ಮತ್ತು-ವಿಸ್ಕಮ್ ಇವು ಮುಖ್ಯ ಉದಾಹರಣೆಗಳು. ಇವು ಜೋಳ, ಬತ್ತ, ಹೊಗೆಸೊಪ್ಪು ಮುಂತಾದ ಬೆಳೆಗಳಿಗೆ ತಗುಲಿ ಅಪಾರ ನಷ್ಟವನ್ನುಂಟು ಮಾಡುತ್ತವೆ.
ಕಳೆಗಳ ಹತೋಟಿ: ಭೂಮಿಯನ್ನು ಮಾನವ ಕೃಷಿ ಮಾಡಿ ತನಗೆ ಬೇಕಾದ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಿದಾಗಿನಿಂದ ಕಳೆ ಹತೋಟಿ ಸಮಸ್ಯೆ ಅವನ ಮುಂದೆ ಇದ್ದೇ ಇದೆ. ಕೃಷಿ ಉದ್ಯಮದಲ್ಲಿನ ಯಶಸ್ಸು ಕಳೆ ಮತ್ತಿತರ ಪೀಡೆಗಳೆದುರು ಸತತವಾದ ಹೋರಾಟದಿಂದಲೇ ಸಾಧ್ಯ. ವ್ಯವಸಾಯದ ಉಗಮದಿಂದ ಈಗ್ಗೆ ಒಂದು ದಶಕದ ಹಿಂದಿನ ವರೆಗೆ ಕಳೆಹತೋಟಿ ಕೈಯಿಂದ ಕೀಳುವುದು ಇಲ್ಲವೇ ಎತ್ತಿನಿಂದ ಎಳೆಯಲ್ಪಟ್ಟ ಕುಂಟೆ ಮುಂತಾದ ಸಾಧನೆಗಳಿಂದಷ್ಟೇ ಆಗುತ್ತಿತ್ತು. ಇತ್ತೀಚೆಗೆ ಕಂಡುಹಿಡಿಯಲ್ಪಟ್ಟ ಹಾರ್ಮೋನ್ ಕಳೆನಾಶಕಗಳ ಬಳಕೆಯಿಂದ ಕಳೆ ಹತೋಟಿಯಲ್ಲಿ ಒಂದು ಬಗೆಯ ಕ್ರಾಂತಿಯೇ ಆಗಿದೆ ಎನ್ನಬಹುದು. ಈ ಕಳೆನಾಶಕಗಳು ಸಲ್ಫ್ಯೂರಿಕ್ ಆಮ್ಲ, ಸೋಡಿಯಂ ಕ್ಲೋರೇಟ್ ಮುಂತಾದ ರಾಸಾಯನಿಕಗಳಿಗಿಂತ ಮೇಲು. ಇವನ್ನು ಅತಿ ಸ್ವಲ್ಪ ಪ್ರಮಾಣದಲ್ಲಿ ನಿಂತಿರುವ ಪೈರಿನ ಮಧ್ಯೆ ಕಳೆಗಳ ನಾಶಕ್ಕೆ ಬಳಸಬಹುದು. ಯಾಂತ್ರಿಕ ಬೇಸಾಯ ಬಳಕೆಯಲ್ಲಿರುವ ಪಾಶ್ಚಾತ್ಯ ದೇಶಗಳಲ್ಲಿ, ಇವುಗಳ ಪ್ರಯೋಗ ಸಾಮಾನ್ಯ. ಆದರೆ ಭಾರತದಲ್ಲಿ ಹಿಡುವಳಿ ಮಿತಿ, ರೈತರ ಅಜ್ಞಾನ, ಸ್ಪ್ರೇಯರ್ ಮುಂತಾದ ಸಲಕರಣೆಗಳ ಬಳಕೆ ಮತ್ತು ರಿಪೇರಿಗಿರುವ ತೊಂದರೆ ಈ ಕಾರಣಗಳಿಂದ ಕಳೆನಾಶಕಗಳ ಬಳಕೆ ಬೆಳೆದಿಲ್ಲ. ಭಾರತದಲ್ಲಿ ಅಗ್ಗವಾಗಿ ಕೂಲಿ ಸಿಕ್ಕುವುದರಿಂದ ಕೈಯಿಂದ ಕಳೆ ತೆಗೆಸುವುದು ಇತರ ಕ್ರಮಗಳಿಗಿಂತ ಹೆಚ್ಚು ರೂಢಿಯಲ್ಲಿದೆ. ಏಕವಾರ್ಷಿಕ ಮತ್ತು ದ್ವೈವಾರ್ಷಿಕ ಕಳೆಗಳನ್ನು ಸುಲಭವಾಗಿ ವಿವರಿಸಬಹುದಾದರೂ ಬಹುವಾರ್ಷಿಕ ಕಳೆಗಳ ನಿವಾರಣೆ ಕಷ್ಟ. ಏಕೆಂದರೆ ಇವು ಬೀಜಗಳಿಂದಲೂ ಬೇರು ಗೆಡ್ಡೆಗಳಿಂದಲೂ ವೃದ್ಧಿಸುತ್ತವೆ. ಇವುಗಳ ಹಾವಳಿಯನ್ನು ಉಳುಮೆ, ಬೆಳೆ ಪರಿವರ್ತನೆ ಮತ್ತು ರಾಸಾಯನಿಕಗಳಿಂದ ಸ್ವಲ್ಪ ಮಟ್ಟಿಗೆ ನಿವಾರಿಸಬಹುದು.

	ಕಳೆಗಳು ಬೆಳೆಯದಂತೆ ತಡೆಯುವುದು ಅವು ಬೆಳೆದ ಮೇಲೆ ಕೈಗೊಳ್ಳುವ ಹತೋಟಿ ಕ್ರಮಕ್ಕಿಂತ ಉತ್ತಮ. ಶುದ್ಧವಾದ ಬಿತ್ತನೆಗಳು, ಸ್ವಚ್ಛವಾದ ಸಾಗುವಳಿ, ಸಕಾಲದಲ್ಲಿ ಗೊಬ್ಬರ ಹಾಕುವುದು, ಬದು ಮತ್ತು ಮೂಲೆಗಳ ಒಪ್ಪ ಇವುಗಳಿಂದ ಕಳೆಗಳ ಹತೋಟಿ ಸಾಧ್ಯ. ಭಾರತದಲ್ಲಿ ಬೀಜ ಪರೀಕ್ಷಣದ ಅನುಕೂಲತೆ ಹೆಚ್ಚಾಗಿ ಇಲ್ಲದಿರುವುದರಿಂದ ರೈತರೇ ತಮ್ಮ ಬಿತ್ತನೆಯನ್ನು ಒಪ್ಪ ಮಾಡಿಕೊಳ್ಳುವುದು ಆವಶ್ಯಕ.

	ಇಷ್ಟೆಲ್ಲ ಎಚ್ಚರಿಕೆ ವಹಿಸಿದ ಮೇಲೂ ಕಳೆ ಬಂದರೆ, ಕೆಲವು ಪರಿಹಾರ ಕ್ರಮಗಳ ಅನುಸರಣೆ ಅನಿವಾರ್ಯ, ಇವನ್ನು ಕಳೆಗಳ ಜಾತಿಗೆ ಅನುಗುಣವಾಗಿ ವ್ಯತ್ಯಾಸ ಮಾಡಬೇಕಾಗುತ್ತದೆ. ಸ್ಥೂಲವಾಗಿ ಯಾಂತ್ರಿಕ, ಜೈವಿಕ, ಸಾಗುವಳಿ ಮತ್ತು ರಾಸಾಯನಿಕ ಕ್ರಮಗಳು ಎಂದು ವರ್ಗೀಕರಿಸಬಹುದು.

	1. ಯಾಂತ್ರಿಕ ಕ್ರಮಗಳು: ಕೈಯಿಂದ ಕಳೆ ಕೀಳುವುದು, ಕುಂಟೆ ಹೊಡಿಯುವುದು, ಮಧ್ಯಂತರ ಉಳುಮೆ, ಕಳೆ ತರಿಯುವುದು, ನೀರು ನಿಲ್ಲಿಸುವುದು, ಸುಡುವುದು, ನೆಲ ಹಸನು ಮಾಡುವುದು ಇವೆಲ್ಲ ಕ್ರಮಗಳನ್ನೂ ಇಲ್ಲಿ ಸೇರಿಸಬಹುದು.

	2. ಜೈವಿಕ ಕ್ರಮಗಳು: ಮಾರಕ ಕೀಟ, ಇಲ್ಲವೇ ರೋಗಾಣುಗಳ ಪ್ರಯೋಗದಿಂದ ಕಳೆಗಳ ನಾಶ ಸಾಧ್ಯ ಎಂಬ ಅಂಶ ಇತ್ತೀಚೆಗೆ ಕಂಡುಬಂದಿದೆ. ಇವು ಕಳೆಗಳಿಗಲ್ಲದೆ ರೈತರಿಗೆ ಮಾರಕವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಪಾಪಾಸ್ ಕಳ್ಳಿಯನ್ನು ಸಿಫಿನೀಶ್ ಕೀಟಗಳ ಪ್ರಯೋಗದಿಂದ ದಕ್ಷಿಣ ಭಾರತದಲ್ಲಿ ನಾಶಪಡಿಸಲಾಯಿತು. ಕೆಲವೆಡೆ ಬದನೆ, ಹೊಗೆಸೊಪ್ಪು ಗಿಡಗಳ ಪರೋಪಜೀವಿಯಾದ ಓರೊಬ್ಯಾಂಕೆಯನ್ನು ಕೆಲವು ಬಗೆಯ ರೋಗಾಣುಗಳು ಆಶ್ರಯದಾತ ಗಿಡಗಳಿಗೆ ತೊಂದರೆ ಮಾಡದೆ ನಾಶ ಮಾಡಿದ ನಿದರ್ಶನಗಳಿವೆ. ದ್ವಿದಳ ಜಾತಿಗೆ ಸೇರಿದ ಕ್ಯಾಲಪಗೋನಿಯಮ್ ಮ್ಯೂಕುನಾಯ್ಡಿಸ್ ಎಂಬ ಸಸ್ಯವನ್ನು ತೆಂಗಿನ ತೋಟಗಳಲ್ಲಿ ಬೆಳೆಸುವುದರಿಂದ ಉಳಿದ ಹುಲ್ಲು- ಕಳೆಗಳನ್ನು ತಡೆಯಬಹುದೆಂದು ಕಂಡುಬಂದಿದೆ.

	3. ಸಾಗುವಳಿ ಕ್ರಮಗಳು: ಸೂಕ್ಷ್ಮ ಸಾಗುವಳಿ ಕ್ರಮಗಳು, ಪೈರು ಶೀಘ್ರವಾಗಿ ಬೆಳೆಯುವುದಕ್ಕೆ ಅನುಕೂಲ ಪರಿಸ್ಥಿತಿಯನ್ನು ಒದಗಿಸಿ ಕಳೆ ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇವುಗಳಲ್ಲಿ ಮುಖ್ಯವಾಗಿ ಹುಲುಸಾಗಿ ಬೆಳೆಯಬಲ್ಲ ಬಿತ್ತನೆ, ಸಾಕಷ್ಟು ಬೀಜ, ಸಕಾಲಿಕ ಬಿತ್ತನೆ ಗೊಬ್ಬರ, ಬೆಳೆಯ ಆವರ್ತನೆ ಮುಂತಾದುವು ಸಹಾಯಕ.

	4. ರಾಸಾಯನಿಕ ಕಳೆ ನಿವಾರಣಾ ಕ್ರಮಗಳು: ಭಾರತದಲ್ಲಿ ಈ ದಿಕ್ಕಿನಲ್ಲಿ ಪ್ರಪ್ರಥಮ ಪ್ರಯತ್ನ ನಡೆದದ್ದು 1937ರಲ್ಲಿ ಲೂಥ್ರ ಅವರಿಂದ. ಅವರು ಸೋಡಿಯಂ ಆರ್ಸಿನೈಟ್ ಪ್ರಯೋಗದಿಂದ ಕಳೆ ನಿವಾರಣೆಗೆ ಯತ್ನಿಸಿದರು. ಆದರೆ ಇದು ಪೈರಿಗೂ ಮಾರಕವಾದ್ದರಿಂದ ಇದರ ಬಳಕೆ ಜನಪ್ರಿಯವಾಗಲಿಲ್ಲ. ಸಲ್ಫ್ಯೂರಿಕ್ ಆಮ್ಲ, ಸೋಡಿಯಂ ಕ್ಲೋರೇಟ್, ಸೋಡಿಯಂ ಬೋರೇಟ್, ಸೋಡಿಯಂ ಆರ್ಸಿನೇಟ್ ಮುಂತಾದವು ಕಳೆನಾಶಕಗಳಾಗಿ ಬಹಳ ಕಾಲದಿಂದ ಬಳಕೆಯಲ್ಲಿವೆ. ಇವು ಕಳೆಗಳ ಜೊತೆಗೆ ಮಣ್ಣಿನ ಉಳಿದ ಸೂಕ್ಷ್ಮಜೀವಿಗಳನ್ನೂ ನಾಶಪಡಿಸುವುದರಿಂದ ಮಣ್ಣಿನಲ್ಲಿ ಇವುಗಳ ಪರಿಣಾಮ ಹೋಗುವ ವರೆಗೆ ಬೇರೆ ಯಾವ ಬೆಳೆಯೂ ಬೆಳೆಯುವುದಿಲ್ಲ. ಭೂಮಿ ಬಹಳ ಕಾಲ ಬಂಜರಾಗುತ್ತದೆ. ಖನಿಜ ತೈಲ, ಟಾರಿನಿಂದ ಪಡೆಯುವ ವಸ್ತುಗಳು ಮುಂತಾದುವನ್ನು ಕಳೆನಾಶ ಕಾರ್ಯಕ್ಕಾಗಿ ಬಳಸುತ್ತಾರೆ. ಇವೆಲ್ಲವುಗಳಿಗೂ ವಿಶಿಷ್ಟ ಮಾರಕ ಗುಣ ಇಲ್ಲದ್ದರಿಂದ ಮತ್ತು ಇವುಗಳಿಂದ ಪೈರಿಗೆ ಸಹ ತೊಂದರೆಯಾಗುವುದರಿಂದ ಇವು ಬಳಸಲರ್ಹವಲ್ಲ. ಹಾರ್ಮೋನ್ ಅಥವಾ ವಿಶಿಷ್ಟ ಮಾರಕ ಕಳೆ ನಾಶಕಗಳು ಜಾರಿಗೆ ಬಂದ ಮೇಲೆ ಉಳಿದ ಕಳೆನಾಶಕಗಳ ಬಳಕೆ ಕಡಿಮೆಯಾಗಿದೆ. ಅಲ್ಲದೆ ಅತ್ಯಲ್ಪ ಪ್ರಮಾಣದಲ್ಲಿ ಹಾರ್ಮೋನ್ ಕಳೆನಾಶಕಗಳನ್ನು ಬಳಸಿ ಕಳೆಗಳನ್ನು ನಿವಾರಿಸಬಹುದಾಗಿದೆ.

	ಕಳೆಸಸ್ಯಗಳ ಮೇಲೆ ಹಾರ್ಮೋನ್ ಕಳೆನಾಶಕಗಳನ್ನು ಪ್ರಯೋಗ ಮಾಡಿದಾಗ ಕಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅವು ಬಗ್ಗಿ ಹೋಗಿ ಒಡೆದು ಸತ್ತು ಹೋಗುತ್ತವೆ. ಹಾರ್ಮೋನ್ ಕಳೆನಾಶಕಗಳು ಕೆಲವು ಜಾತಿಯ ಸಸ್ಯಗಳಿಗೆ ಮಾತ್ರ ಮಾರಕ. ಉಳಿದವುಗಳಿಗೆ ತೊಂದರೆ ಮಾಡುವುದಿಲ್ಲ. ಈ ಕಾರಣದಿಂದ ಇವುಗಳ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಇವನ್ನು ಪೈರು ಮೊಳಕೆ ಬರುವ ಮುಂಚೆ, ಇಲ್ಲವೇ ಅನಂತರ ಹಾಕಬಹುದು. ಬೆಳಗ್ಗೆ ಅಥವಾ ಸಂಜೆ, ಗಾಳಿ ಬಿರುಸಾಗಿಲ್ಲದ ಸಮಯದಲ್ಲಿ ಅವನ್ನು ಪ್ರಯೋಗಿಸುವುದು ಸೂಕ್ತ. ಕಳೆ ಇನ್ನೂ ಸಸಿಯಾಗಿದ್ದಾಗ ಅದರ ನಾಶ ಸುಲಭ.

	ಹುಲ್ಲುಕಳೆಗಳ ನಾಶಕ್ಕೆ ಕಳೆನಾಶಕಗಳನ್ನು ಪೈರು ಮೊಳೆಯುವುದಕ್ಕೆ ಮೊದಲೇ ಪ್ರಯೋಗಿಸಿದರೆ ಅನುಕೂಲ. ಕಳೆನಾಶಕಗಳನ್ನು ಹಾಕಿದ ಮೇಲೆ ಸ್ವಲ್ಪ ಮಳೆ ಬಿದ್ದರೆ ಇಲ್ಲವೆ ಕೊಂಚ ನೀರು ಹಾಯಿಸಿದರೆ ಅವು ಕರಗಿ, ಮಣ್ಣಿನಲ್ಲಿರುವ ಕಳೆ ಬೀಜಕ್ಕೆ ಅವುಗಳ ಸಂಪರ್ಕವಾಗಿ ಫಲಿತಾಂಶ ಪರಿಣಾಮಕಾರಿಯಾಗಿರುತ್ತದೆ.

	ಹಾರ್ಮೋನ್ ಕಳೆನಾಶಕಗಳ ಪ್ರಯೋಗಕ್ಕೆ ಸ್ಪ್ರೇಯರ್ ಅಥವಾ ಡಸ್ಟರ್ ಸಲಕರಣೆಗಳನ್ನು ಬಳಸಬಹುದು. ಎಕರೆಗೆ ಸಾಮಾನ್ಯವಾಗಿ 50ರಿಂದ 100 ಗ್ಯಾಲನ್ ದ್ರಾವಣ ಸಾಕು. ಹಲವಾರು ಬಗೆಯ ಕಳೆಗಳಿದ್ದರೆ ಎರಡು ಮೂರು ತರಹೇ ಕಳೆನಾಶಕಗಳು ಬೇಕಾಗಬಹುದು. ಬಹುವಾರ್ಷಿಕ ಕಳೆಗಳ ನಾಶಕ್ಕೆ ಹಲವಾರು ಬಾರಿ ಕಳೆನಾಶಕಗಳನ್ನು ಬಳಸಬೇಕು.

	2.4-ಡಿ, ಎಂ.ಸಿ.ಪಿ.ಎ. ಟಿಸಿಎ. 2.4, 5-ಟಿ, ಎಂಇಪಿಎ, ಎಂಎಚ್., ಡಲಪಾನ್, ಡೈಕಾಟಾಕ್ಸ್, ಫೆರಾನಾಕ್ಸೇನ್, ಹೆಡನಾಲ್, ಎಸ್‍ಐಎಂ., ಅಗ್ರಾಕ್ಸೋನ್, ಅಟ್ರಾಸೀನ್, ರೆಂಡಾರ್, ಸೀಮಸೀನ್, ಟ್ರೆಪ್ಟಾಕ್ಸ್ - ಇವು ಬಳಕೆಯಲ್ಲಿರುವ ಮುಖ್ಯವಾದ ಕಳೆನಾಶಕಗಳು.

	1. 2.4-ಡಿ (2, 4-ಡೈಕ್ಲೋರೋಫೀನಾಕ್ಸಿ ಅಸಿಟಿಕ್ ಆಸಿಡ್): ಇದು ಸೋಡಿಯಂ ಅಥವಾ ಅಮೋನಿಯಂ ಲವಣ ಇಲ್ಲವೇ ಸಾವಯವ ಲವಣದ ರೂಪದಲ್ಲಿ ದೊರೆಯುತ್ತದೆ. 2.4-ಡಿ ಸೋಡಿಯಂ ಲವಣ ಸಾವಯವ ಲವಣದಷ್ಟು ತೀವ್ರ ಪರಿಣಾಮಕಾರಿಯಲ್ಲ. 2.4-ಡಿ ಅಮೋನಿಯಂ ಲವಣ ಮಧ್ಯಸ್ಥ. ಅದು ಬೇಗ ಹಬೆಯಾಗುತ್ತದೆ. ಅದರ ಹಬೆಯಿಂದ ಕೆಲವು ಪೈರುಗಳಿಗೆ ತೊಂದರೆಯಾಗಬಹುದು. ಅಗಲವಾದ ಎಲೆಯುಳ್ಳ ಪೈರುಗಳಿಗೆ 2.4-ಡಿಯಿಂದ ತೊಂದರೆಯಾಗುವ ಸಂಭವ ಉಂಟು. ಆದರೆ, ಹುಲ್ಲು ಬೆಳೆಗಳಿಗೆ ಇದರಿಂದ ಹಾನಿಯೇ ಇಲ್ಲ. ಒಂದು ಎಕರೆಗೆ 1/2ದಿಂದ ಒಂದು ಪೌಂಡಿನಂತೆ 80ರಿಂದ 100 ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

	2. ಎಂ.ಸಿ.ಪಿ.ಎ. (2-ಮೀಥೈಲ್-4-ಕ್ಲೋರೋಫೀನಾಕ್ಸಿ ಅಸಿಟಿಕ್ ಆಸಿಡ್): ಇದರ ಸೋಡಿಯಂ ಲವಣ ಬಳಕೆಯಲ್ಲಿವೆ. ಗುಣಗಳಲ್ಲಿ 2.4-ಡಿಯನ್ನು ಹೋಲುತ್ತದೆ.

	3. ಟಿ.ಸಿ.ಎ. (ಟ್ರೈಕ್ಲೋರೋ ಅಸಿಟಿಕ್ ಆಸಿಡ್): ಇದು ಕೂಡಾ ಸೋಡಿಯಂ ಲವಣದ ರೂಪದಲ್ಲಿ ದೊರೆಯುತ್ತದೆ. ಹುಲ್ಲುಗಳನ್ನು ಅದರಲ್ಲೂ ಗರಿಕೆ ಹುಲ್ಲನ್ನು ನಾಶಪಡಿಸುತ್ತದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಅಂದರೆ, ಎಕರೆಗೆ 50-100 ಪೌಂಡಿನಂತೆ ಪ್ರಯೋಗಿಸಬೇಕಾಗುತ್ತದೆ.

	4. 2, 4.5-ಡಿ (2, 4, 5 ಟ್ರೈಕ್ಲೋರೋಫೀನಾಕ್ಸಿ ಅಸಿಟಿಕ್ ಆಸಿಡ್): ಅಮೋನಿಯಂ ಲವಣ ಮತ್ತು ಸಾವಯವ ಲವಣ ರೂಪದಲ್ಲಿ ಇದು ದೊರೆಯುತ್ತದೆ. ಅರಣ್ಯದ ಕಳೆಗಳಿಗೆ ಇದು ಪರಿಣಾಮಕಾರಿ.				
(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ